ಅಸ್ಥಿರತೆ
ಆಳದಲ್ಲೆಲೋ ಕದಡಿದೆ ಎನ್ನಮನ
ನಿದ್ರಾದೇವಿಯ ಜೋಗುಳ
ಕಿವುಡಾದ ಕಿವಿಗೇಕೆ ಕೇಳದು?
ಬಾರದಾ ನಿದ್ದೆ; ಸ್ವಪ್ನಲೋಕಕೆ ತಡೆ
ಬಗೆ ಬಗೆಯ ದುಡುಕು ದುಮ್ಮಾನಗಳು
ಅವ್ಯಾಹತವಾಗಿ ಹರಿವ ಚಿಂತೆಗೆಲ್ಲಿ ಅಣೆಕಟ್ಟು?
ಆಳದಲ್ಲೆಲೋ ಕದಡಿದೆ ಎನ್ನಮನ
ಕಮರಿದಾ ಕಣ್ಗಳಿಗೆ
ರಪ್ಪೆ ಮುಚ್ಚದದೇಕೆ?
ಭಾರದಾ ಚಕ್ಷುಗಳು ತೆರೆದು ಹುಡುಕುತಿವೆ
ಅಕ್ಷರಗಳೋಳು ಪದ ಜೋಡಿಸಿ, ವಾಕ್ಯಗಳ ರಚಿಸಿ
ಸತ್ವಹಿನ ಅರ್ಥಗಳ, ಗೊಂದಲದ ಅನ್ವರ್ಥಗಳ
ಪುಟಗಳ ತಿರುವುತ್ತ, ಕತೆಗಳನು ಹುಡುಕುತ್ತ..
ಆಳದಲ್ಲೆಲೋ ಕದಡಿದೆ ಎನ್ನಮನ
ಬಳಲಿದಾ ದೇಹಕ್ಕೆ
ಸುಖದ ಸುಪ್ಪತ್ತಿಗೆಯು ಶೂಲವಾಗಿಹುದು ಏಕೆ?
ಸ್ಥಿರ ಜಡತೆಗೊಳಗಾಗದೆ ಹೊರಳುತ್ತಿದೆ ಎಡಬಲಕೆ
ಉಲ್ಲಾಸದ ಉಯ್ಯಾಲೆಯ ಸರಪಳಿ ಕಿತ್ತು
ಸಮತೋಲನ, ಸಂಯಮ, ಸ್ಥಿರತೆ ನಶಿಸಿ
ಆಳದಲ್ಲೆಲೋ ಕದಡಿದೆ ಎನ್ನಮನ
ಸಮರದ ರಣಕಹಳೆ
ಮೌನ ಭೇದಿಸಿ ಏನನೆಬ್ಬಿಸಿತೋ?
ಸುಂಟರಗಾಳಿಗೆ ಸಿಕ್ಕ ತೃಣದತೆರೆ
ಸುಳಿಯಲಿ ಮುಳುಗುವಾಭಾಸ
ಏಕೀ ಏಕಾಗ್ರತೆಗೆ ಭಂಗ?
ಯಾರೆಸೆದರೊ ಕಲ್ಲ?
ಸುಮ್ಮನೆ ಮುಳಗದೆ ಅದು...
ಆಳದಲ್ಲೆಲೋ ಕದಡಿದೆ ಎನ್ನಮನ
⁃ ನಾ ಶ್ರೀ ಮೋಹನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ